Bank Loan : ಸಾಲದ EMI ಕಟ್ಟುವವರಿಗೆ ಗುಡ್ ನ್ಯೂಸ್..! ಜುಲೈನಿಂದ RBI ಹೊಸ ನಿಯಮ ಜಾರಿ, ತಿಳಿದುಕೊಳ್ಳಿ
ಕಷ್ಟಕಾಲದಲ್ಲಿ ತೆಗೆದುಕೊಂಡ ಸಾಲದ ಇಎಂಐ (EMI) ಕಟ್ಟಲು ಒಂದೆರಡು ತಿಂಗಳು ಲೇಟ್ ಆಯ್ತಾ? ಬ್ಯಾಂಕ್ನವರು ಬಿಡುವ ರಿಕವರಿ ಏಜೆಂಟ್ಗಳು (Recovery Agents) ದಿನಕ್ಕೆ ಹತ್ತಾರು ಬಾರಿ ಕಾಲ್ ಮಾಡಿ, ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಅಕ್ಕಪಕ್ಕದವರ ಮುಂದೆ ನಿಮ್ಮ ಮಾನ ಹರಾಜು ಹಾಕುತ್ತಿದ್ದಾರಾ? ಹಾಗಾದರೆ ನಿಮಗೊಂದು ದೊಡ್ಡ ರಿಲೀಫ್ ಇಲ್ಲಿದೆ!
ಹೌದು, ಸಾಲ ತಗೋವಾಗ ಇರೋ ಖುಷಿ, ವಾಪಸ್ ಕಟ್ಟೋವಾಗ ಇರಲ್ಲ ಅನ್ನೋದು ನಿಜ. ಆದರೆ ಸಾಲ ವಸೂಲಿ ಮಾಡುವ ನೆಪದಲ್ಲಿ ಬ್ಯಾಂಕ್ನವರು ದಬ್ಬಾಳಿಕೆ ಮಾಡುವುದನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಸ ಅಸ್ತ್ರ ಪ್ರಯೋಗಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ಬೆನ್ನಲ್ಲೇ, “ವಾಣಿಜ್ಯ ಬ್ಯಾಂಕುಗಳು – ಜವಾಬ್ದಾರಿಯುತ ವ್ಯವಹಾರ ನಡವಳಿಕೆ” ಎಂಬ ಹೊಸ ನಿಯಮಗಳು ಜಾರಿಗೆ ಬರುತ್ತಿವೆ. ಜನಸಾಮಾನ್ಯರಿಗೆ ನೆಮ್ಮದಿ ನೀಡುವ ಆ ರೂಲ್ಸ್ ಯಾವುವು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
ಗುಂಡಾಗಿರಿಗೆ ಬ್ರೇಕ್, ಪೊಲೀಸ್ ವೆರಿಫಿಕೇಶನ್ ಕಡ್ಡಾಯ!
ಇನ್ಮುಂದೆ ಬ್ಯಾಂಕ್ಗಳು ಯಾರು ಯಾರನ್ನೋ ಗುತ್ತಿಗೆ ಆಧಾರದ ಮೇಲೆ ರಿಕವರಿಗೆ ಕಳಿಸುವ ಹಾಗಿಲ್ಲ. ಏಜೆಂಟರ ನಡವಳಿಕೆ ಹೇಗಿರಬೇಕು ಎಂಬುದಕ್ಕೆ ಪಕ್ಕಾ ಪಾಲಿಸಿ ಇರಲೇಬೇಕು. ಥರ್ಡ್ ಪಾರ್ಟಿ ಏಜೆನ್ಸಿ ಅಂತ ಹೇಳಿ ಬ್ಯಾಂಕ್ ಕೈ ತೊಳೆದುಕೊಳ್ಳುವಂತಿಲ್ಲ. ಮನೆಗೆ ಬರುವ ಪ್ರತಿಯೊಬ್ಬ ಏಜೆಂಟ್ನ ‘ಪೊಲೀಸ್ ವೆರಿಫಿಕೇಶನ್’ (ಹಿನ್ನೆಲೆ ಪರಿಶೀಲನೆ) ಆಗಿರಲೇಬೇಕು. ರೌಡಿಗಳಂತೆ ವರ್ತಿಸುವವರನ್ನು ಬ್ಯಾಂಕ್ಗಳು ಬಿಡುವಂತಿಲ್ಲ.
ಟ್ರೈನಿಂಗ್ ಮತ್ತು ಸರ್ಟಿಫಿಕೇಟ್ ಇಲ್ಲದಿದ್ದರೆ ನೋ ಎಂಟ್ರಿ!
ಬೆದರಿಸಿ ಹಣ ವಸೂಲಿ ಮಾಡುವುದಲ್ಲ, ಗೌರವಯುತವಾಗಿ ಕೆಲಸ ಮಾಡುವುದನ್ನು ಏಜೆಂಟ್ಗಳು ಕಲಿಯಬೇಕು. ಅದಕ್ಕಾಗಿ ಪ್ರತಿಯೊಬ್ಬ ಏಜೆಂಟ್ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಅಂಡ್ ಫೈನಾನ್ಸ್’ (IIBF) ನಡೆಸುವ ಪರೀಕ್ಷೆಯಲ್ಲಿ ಪಾಸ್ ಆಗಿ, ಸರ್ಟಿಫಿಕೇಟ್ ಪಡೆದಿರುವುದು ಕಡ್ಡಾಯ.
ಮನೆಗೆ ಬರುವ ಮುನ್ನ ಮೆಸೇಜ್ ಬರಲೇಬೇಕು
ಪಾರದರ್ಶಕತೆ ಕಾಪಾಡಲು, ಬ್ಯಾಂಕ್ಗಳು ತಮ್ಮ ಅಧಿಕೃತ ಏಜೆಂಟ್ಗಳ ಲಿಸ್ಟ್ ಅನ್ನು ವೆಬ್ಸೈಟ್ನಲ್ಲಿ ಹಾಕಬೇಕು. ನಿಮ್ಮ ಮನೆಗೆ ವಸೂಲಾತಿಗೆ ಹೊಸಬರು ಬರುತ್ತಿದ್ದಾರೆ ಎಂದರೆ, ಬ್ಯಾಂಕ್ ನಿಮಗೆ SMS ಅಥವಾ ಇಮೇಲ್ ಮೂಲಕ ಮೊದಲೇ ಮಾಹಿತಿ ನೀಡಲೇಬೇಕು. ಇದರಿಂದ ನಕಲಿ ಏಜೆಂಟ್ಗಳ ವಂಚನೆ ತಪ್ಪುತ್ತದೆ.
ಮದುವೆ, ಸಾವು-ನೋವಿನ ಮನೆಯಲ್ಲಿ ವಸೂಲಾತಿ ಇಲ್ಲ!
ಮನೆಯಲ್ಲಿ ಮದುವೆ ನಡೆಯುತ್ತಿದ್ದರೆ, ಯಾರಾದರೂ ತೀರಿಕೊಂಡಿದ್ದರೆ ಅಥವಾ ಹಬ್ಬ-ಹರಿದಿನಗಳಿದ್ದರೆ ರಿಕವರಿ ಏಜೆಂಟ್ಗಳು ಆ ಕಡೆ ತಲೆ ಹಾಕುವ ಹಾಗಿಲ್ಲ.